ಸಭೆಯ ಬಗ್ಗೆ

ಶ್ರೀ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು

ಶ್ರೀಶಂಕರಭಗವತ್ಪಾದರು ಸನಾತನಧರ್ಮದ ಸಂರಕ್ಷಣೆಗಾಗಿ ಭಾರತದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಚತುರಾಮ್ನಾಯಪೀಠಗಳಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠವು ಮೊದಲನೆಯದು. ಈ ಪೀಠದ ೩೫ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಜನಸಾಮಾನ್ಯರಲ್ಲಿ ಸಂಸ್ಕೃತಾಧ್ಯಯನವನ್ನು ಪ್ರೋತ್ಸಾಹಿಸಲು ಶಾರದಾಪೀಠದ ಅಂಗಸಂಸ್ಥೆಯಾದ ಶ್ರೀ ಸುರಸರಸ್ವತೀ ಸಭೆಯನ್ನು ಸ್ಥಾಪಿಸಿದರು. ಸೌಮ್ಯಸಂವತ್ಸರದ ಆಶ್ವಯುಜ ಕೃಷ್ಣ ಚತುರ್ದಶಿಯಂದು (೦೮-೧೧-೧೯೬೯) ಶ್ರೀ ಸುರಸರಸ್ವತೀಸಭೆಯು ಸ್ಥಾಪಿತವಾಯಿತು. ಈಗಿನ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಪರಿಪೂರ್ಣಾನುಗ್ರಹ ಮತ್ತು ಮಾರ್ಗದರ್ಶನದಲ್ಲಿ ಸಭೆಯು ಕಾರ್ಯ ನಿರ್ವಹಿಸುತ್ತಿದೆ.

ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು

ಸುರಸರಸ್ವತೀ ಸಭೆಯು ಸಂಸ್ಕೃತಪರೀಕ್ಷೆಗಳನ್ನು ನಡೆಸಿ ಹೆಚ್ಚು ಅ೦ಕಗಳನ್ನು ಗಳಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ಪ್ರತಿಭಾವ೦ತ ವಿದ್ಯಾರ್ಥಿಗಳನ್ನು ಗೌರವಿಸುತ್ತಾ, ಪ್ರೋತ್ಸಾಹಿಸುತ್ತಿದೆ. ಐದು ಹಂತಗಳಲ್ಲಿ ಸರಳ ಸಂಸ್ಕೃತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಭಾಷೆಯನ್ನು ಹ೦ತ ಹ೦ತವಾಗಿ ಸುಲಭವಾಗಿ ಅರಿಯಲು ಉತ್ತಮ ವಿದ್ವಾಂಸರ ಸಹಕಾರದಿಂದ ಆಧುನಿಕ ರೀತಿಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ.

ಪ್ರಥಮಾ, ದ್ವಿತೀಯಾ, ತೃತೀಯಾ, ತುರೀಯಾ, ಪ್ರವೇಶ – ಎ೦ಬ ಐದು ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ, ಸಾಮಾನ್ಯವಾಗಿ ಜನವರಿ ಮತ್ತು ಆಗಸ್ಟ್ ಮಾಸದ ಕೊನೆಯ ಭಾನುವಾರಗಳ೦ದು ನಡೆಸಲಾಗುವುದು.ಈ ಪರೀಕ್ಷೆಗಳಿಗೆ ಉಚಿತವಾಗಿ ಪಾಠ ಹೇಳಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿರುವ ವಿದ್ವಾ೦ಸರೇ ಸಭೆಗೆ ಆಧಾರ ಸ್ತ೦ಭಗಳು.

Comments are closed.